Current Date 31 Jul, 2026

ದರ್ಶನ್​ರ ಮತ್ತೊಂದು ಸಿನಿಮಾ ಮರು ಬಿಡುಗಡೆಗೆ ಸಜ್ಜು

ಕೊಲೆ ಆರೋಪದ ಮೇಲೆ ಜೈಲು ಸೇರಿರುವ ದರ್ಶನ್ ಅನ್ನು ಹೊರತರಲು ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಅಭಿಮಾನಿಗಳು ಬೇಸರದಲ್ಲಿದ್ದಾರೆ. ಅಭಿಮಾನಿಗಳ ಈ ಸೆಂಟಿಮೆಂಟ್ ಅನ್ನು ಲಾಭವನ್ನಾಗಿ ಮಾಡಿಕೊಳ್ಳಲು ಕೆಲವರು ದರ್ಶನ್​ರ ಹಳೆಯ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಜೈಲು ಸೇರಿ ನಾಲ್ಕು ತಿಂಗಳಾಗಿವೆ. ಅವರ ಕುಟುಂಬದವರು ದರ್ಶನ್ ಅನ್ನು ಕನಿಷ್ಟ ಜಾಮೀನಿನ ಮೇಲಾದರೂ ಹೊರಗೆ ತರುವ ಪ್ರಯತ್ನದಲ್ಲಿದ್ದಾರೆ. ದರ್ಶನ್, ಜೈಲು ಸೇರಿರುವುದರಿಂದ ಅಭಿಮಾನಿಗಳು ಸಹ ಬೇಸರದಲ್ಲಿದ್ದಾರೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡಿರುವ ಕೆಲ ನಿರ್ಮಾಪಕರು, ಅಭಿಮಾನಿಗಳ ಸೆಂಟಿಮೆಂಟ್ ಅನ್ನೇ ಬಂಡವಾಳವಾಗಿಟ್ಟುಕೊಂಡು ದರ್ಶನ್ ನಟನೆಯ ಕೆಲ ಹಳೆಯ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.

ದರ್ಶನ್ ಬಂಧನವಾದ ಬಳಿಕ ದರ್ಶನ್​ರ ಕೆಲ ಸಿನಿಮಾಗಳು ಮರು ಬಿಡುಗಡೆ ಆಗಿದೆ. ‘ಶಾಸ್ತ್ರಿ’, ‘ಕರಿಯ’ ಇನ್ನೂ ಕೆಲ ಸಿನಿಮಾಗಳು ಮರು ಬಿಡುಗಡೆ ಆಗಿವೆ. ಇತ್ತೀಚೆಗಷ್ಟೆ ವಿಜಯಲಕ್ಷ್ಮಿ ದರ್ಶನ್ ಅವರು ‘ನವಗ್ರಹ’ ಸಿನಿಮಾ ಶೀಘ್ರವೇ ಮರು ಬಿಡುಗಡೆ ಆಗುವುದಾಗಿ ಇನ್​ಸ್ಟಾಗ್ರಾಂನಲ್ಲಿ ಸಂದೇಶ ಹಂಚಿಕೊಂಡಿದ್ದರು. ಇದೀಗ ಹೊಸ ಸುದ್ದಿಯೆಂದರೆ ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಸಹ ಮರು ಬಿಡುಗಡೆ ಆಗಲಿದೆ.